Page 1 of 1

ಕಟ್ಟಡಕ್ಕೆ ವಾಸ್ತು ಅತ್ಯವಶ್ಯಕವೇ ??

Posted: August 24th, 2021, 11:21 am
by msn1270
ಮನುಷ್ಯ ತಾನು ನಿರ್ಮಿಸುವ ಕಟ್ಟಡಕ್ಕೆ ವಾಸ್ತು ಅತ್ಯವಶ್ಯಕ ಎನ್ನುವವರು, ಒಮ್ಮೆ ಯಾವುದೇ ಪೂರ್ವಾಗ್ರಹವಿಲ್ಲದೆ ಮುಕ್ತಮನಸ್ಸಿನಿಂದ ತಪ್ಪದೇ ಈ ಲೇಖನ ಓದಿ:

ಸುಂದರ ಮೂರ್ತಿಯವರು ವ್ಯವಹಾರದಲ್ಲಿ ಶ್ರದ್ದೆಯಿಂದ ದುಡಿದು ಉತ್ತಮವಾಗಿ ದುಡ್ಡು ಮಾಡಿದ್ದು, ಜೀವನದಲ್ಲಿ, ಶಾಂತಿ, ನೆಮ್ಮದಿ ಹಾಗು ಸಂತೃಪ್ತಿಯಿಂದ ತುಂಬು ಜೀವನ ನಡೆಸುತ್ತಿದ್ದರು. ಇತ್ತೀಚೆಗೆ ಅವರು ತೀರ್ಥಹಳ್ಳಿಯ ಹೊರವಲಯದಲ್ಲಿ ಒಂದು ಜಮೀನು ಕೊಂಡುಕೊಂಡಿದ್ದರು. ಅದರಲ್ಲಿ ಅಡಿಕೆ, ಕಾಫಿ, ಕಾಳು ಮೆಣಸು ಹಾಗು ಇತರ ವಾಣಿಜ್ಯ ಬೆಳೆಗಳು ತೋಟದಲ್ಲಿ ಚೆನ್ನಾಗಿ ಬೆಳೆದಿದ್ದವು.

ಅದರಲ್ಲಿ ನಾಲ್ಕು ಸುಂದರ ಕಾಟೇಜುಗಳನ್ನೂ ನಿರ್ಮಿಸಿದ್ದರು. ತೋಟದ ಒಂದು ಕಡೆಯಲ್ಲಿ ದೊಡ್ಡ ಕೆರೆ ಇದೆ, ಅದರಲ್ಲಿ ಬೋಟಿಂಗ್ ಕೂಡಾ ಮಾಡಬಹುದು. ಅವರ ಉದ್ದೇಶವೇ ಅದನ್ನು ಹೊಂಮ್ ಸ್ಟೇ ಮಾಡುವುದಾಗಿದೆ. ತೋಟದಲ್ಲಿ ಹಲವು ರೀತಿಯ ದೊಡ್ಡ ದೊಡ್ಡ ಮಾವಿನ ಮರಗಳಿದ್ದವು. ಅದರ ಹಣ್ಣುಗಳು ತಿನ್ನಲುಬಲು ರುಚಿ. ಅವರ ಹೆಂಡತಿಗೆ ಮಾವಿನ ಹಣ್ಣನ್ನು ಕಂಡರೆ ಪಂಚಪ್ರಾಣ. ಅದಕ್ಕಾಗಿಯೇ ಅವರು ಆ ಆಸ್ತಿ ಕೊಂಡಿದ್ದು.

ಇತ್ತೀಚೆಗೆ ಅವರು ತೋಟದಲ್ಲಿ ಕೆಲವು ಬದಲಾವಣೆ ಕಾರ್ಯ ಕೈಗೆತ್ತಿಕೊಳ್ಳಲು ( Renovation) ಮುಂದಾಗಿದ್ದರು. ಆಗ ಅವರ ಸ್ನೇಹಿತರು ಅವರಿಗೆ ಒಬ್ಬ ವಾಸ್ತು ಪಂಡಿತರ ಸಲಹೆ ಪಡೆಯಲು ಹೇಳಿದರು. ಸುಂದರ ಮೂರ್ತಿಯವರಿಗೆ ಅದರ ಬಗ್ಗೆ ಯಾವುದೇ ನಂಬಿಕೆ ಇರಲಿಲ್ಲ ಆದರೂ ಗೆಳೆಯರ ಅಭಿಮಾನ ಹಾಗೂ ಸಲಹೆಗೆ ಕಟ್ಟುಬಿದ್ದು, ಶಿವಮೊಗ್ಗದ ಒಬ್ಬ ಪ್ರಖ್ಯಾತ ವಾಸ್ತು ಸಲಹೆಗಾರರಾದ ಶ್ರೀ ಶಂಕರ ನಾರಾಯಣರವರನ್ನು ಭೇಟಿಮಾಡಿದರು ಹಾಗು ತಮ್ಮ ಅಭಿಪ್ರಾಯವನ್ನು ಅವರಲ್ಲಿ ತಿಳಿಸಿದರು. ಅವರುಗಳು ತೀರ್ಥಹಳ್ಳಿಯಲ್ಲಿ ಊಟ ಮುಗಿಸಿ, ತಮ್ಮ ಜಮೀನಿನ ಕಡೆಗೆ ಪ್ರಯಾಣ ಬೆಳೆಸಿದರು.

ಸುಂದರ ಮೂರ್ತಿಯೇ ಕಾರು ಚಲಾಯಿಸುತ್ತಿದ್ದರು. ಕಾರು ಹೆದ್ದಾರಿಯಲ್ಲಿ ಹೋಗುತ್ತಿದ್ದಾಗ ಹಿಂದುಗಡೆಯ ಯಾವುದೇ ಕಾರಿನವರು ಹಾರನ್ ಮಾಡಿದಾಗಲೆಲ್ಲಾ ಅವರುಗಳಿಗೆ ಸುಂದರ ಮೂರ್ತಿ ತಮ್ಮ ಕಾರನ್ನು ಪಕ್ಕಕ್ಕೆ ಸರಿಸಿ ದಾರಿ ಬಿಟ್ಟುಕೊಡುತ್ತಿದ್ದರು. ಆಗ ವಾಸ್ತು ಪಂಡಿತ ಶಂಕರನಾರಾಯಣ ದ.ಕ.ಕನ್ನಡದ ಉಚ್ಛಾರಣೆಯಲ್ಲಿ ನಗು ನಗುತ್ತಾ ಎಂತದು ಮಾರಾಯರೇ ನೀವು ಎಂತ ಎಲ್ಲರಿಗೂ ಏಕೆ ಸೈಡ್ ಕೊಡೋದಾ ಎಂದು ಪ್ರಶ್ನಿಸಿದಾಗ.

ಸುಂದರಮೂರ್ತಿಯವರು ನಗುತ್ತಲೇ ಹೇಳಿದರು, ಬಹುಶಃ ಅವರಿಗೆ ಏನೋ ಅವಸರ ಇರಬಹುದು ಹೋಗಲಿ ಬಿಡಿ ನಮಗೇನೂ ಗಡಿಬಿಡಿ ಇಲ್ಲವಲ್ಲಾ ಎಂದು ಶಾಂತವಾಗಿ ಉತ್ತರಿಸಿದರು. ಮುಂದೆ ಅವರ ಬೇರೆ ಸಂಭಾಷಣೆ ಮುಂದುವರೆಸಿ, ಕಾರು ಒಂದು ಕಿರಿದಾದ ರಸ್ತೆಯಲ್ಲಿ ಹೊಗುವಾಗ ಇದ್ದಕ್ಕಿದ್ದಂತೆ ತೋಟದ ಕೂಲಿಕೆಲಸಗಾರರ ಕುಟುಂಬದ ಒಂದು ಸಣ್ಣ ಮಗುವೊಂದು ರಸ್ತೆಯ ಈ ಕಡೆಯಿಂದ ಆಕಡೆಗೆ ಓಡಿತು.

ಮಗು ರಸ್ತೆಯನ್ನು ದಾಟಿಹೋದ ಮೇಲೂ ಸುಂದರಮೂರ್ತಿಯವರು ಕಾರು ನಿಧಾನವಾಗಿ ಚಲಿಸುತ್ತಾ ಕಾರಿನ ವೇಗ ಹೆಚ್ಚಿಸದೆ ರಸ್ತೆಯ ಅಕ್ಕಾ ಪಕ್ಕಾ ಕಣ್ಣು ಹಾಯಿಸುತ್ತಿದ್ದುದನ್ನು ನೋಡಿದ ಶಂಕರನಾರಾಯಣರಿಗೆ ಅಚ್ಚರಿ ಕಾದಿತ್ತು. ಆ ಮಗುವನ್ನು ಹಿಂಬಾಲಿಸಿಕೊಂಡು ಇನ್ನೊಂದು ಮಗು ಓಡೋಡಿ ಬಂತು. ಆಗ ಶಂಕರ ನಾರಾಯಣರು ಆಶ್ಚರ್ಯದಿಂದ ಕೇಳಿದರು ಅದು ನಿಮಗೆ ಹೇಗೆ ಗೊತ್ತಾಯಿತು ಇನ್ನೊಂದು ಮಗು ಬರುತ್ತಿದೆ ಎಂದು ಪ್ರಶ್ನಿಸಿದರು.

ಆಗ ಸುಂದರ ಮೂರ್ತಿಯವರು ಹೇಳಿದರು ಆ ಮಗು ವಿಜಯದ ನಗೆ ಬೀರುತ್ತಾ ಓಡಿಬರುವಾಗಲೇ ಗೊತ್ತಾಯಿತು ಅದು ತನ್ನ ಗೆಳೆಯನ್ನು ಹಿಂದಿಕ್ಕಿ ಸೋಲಿಸಿ ಬರುತ್ತಿದೆ ಎಂದು ಆಗಲೇ ಊಹಿಸಿದೆ ಅದರ ಹಿಂದೆ ಇನ್ನೊಂದು ಮಗು ಇದೆ ಎಂದು.

ಶಂಕರ ನಾರಾಯಣರು ಕೈಮುಷ್ಟಿಯಲ್ಲಿ ವಿಜಯ ಚಿಹ್ನೆ ತೋರುತ್ತಾ ನಿಮ್ಮ ಸಮಯ ಪ್ರಜ್ಞೆ ಗ್ರೇಟ್ ಎಂದು ತುಂಬು ಹೃದಯದಿಂದ ಅಭಿನಂದಿಸಿದರು.

ಈಗ ಅವರ ಕಾರು ಜಮೀನಿನ ಗೇಟ್ ಬಳಿ ಬಂದು ನಿಂತಿತು. ಅವರಿಬ್ಬರೂ ಕಾರಿನಿಂದ ಇಳಿದರು. ಆಗ ಏಳೆಂಟು ಪಕ್ಷಿಗಳು ಇದ್ದಕ್ಕಿದ್ದಂತೆ ಆಗಸಕ್ಕೆ ಹಾರಿದವು. ಆಗ ಸುಂದರ ಮೂರ್ತಿಯವರು, ಪಂಡಿತರೆ ನಿಮಗೆ ಬೇಸರವಿಲ್ಲದಿದ್ದರೆ ನಾವು ಸ್ವಲ್ಪ ಹೊತ್ತು ಇಲ್ಲೇ ಕಾಯೋಣ, ನಂತರ ತೋಟದ ಒಳಗೆ ಹೋಗೋಣ ಎಂದರು. ಶಂಕರನಾರಾಯಣರು ಏನೇನೂ ಅರ್ಥವಾಗದೆ ಕೇಳಿದರು ಏನು ಸಮಾಚಾರ ಎಂದು.?

ಏನಿಲ್ಲಾ, ಬಹುಶಃ ನಮ್ಮ ತೋಟದ ಮಾವಿನ ಮರಕ್ಕೆ ಹಣ್ಣು ಕೀಳಲು ಸುತ್ತ ಮುತ್ತಲಿನ ಸಣ್ಣ ಪುಟ್ಟ ಹುಡುಗರು ಈಗಾಗಲೇ ಮರ ಹತ್ತಿರುತ್ತಾರೆ.ನಾವು ದಿಢೀರನೆ ಮುಂದೆ ಹೋದರೆ, ಅಮಾಯಕ ಮಕ್ಕಳು ಗಾಬರಿಯಿಂದ ಮರದಿಂದ ಅನಾಮತ್ತು ಹಾರಿ ಪೆಟ್ಟು ಮಾಡುಕೊಳ್ಳುತ್ತವೆ ಎಂದು ಹಾಸ್ಯವಾಗಿ ನುಡಿದರು.

ಈಗ ಪಂಡಿತರು ಅಲ್ಲಿಯೇ ದಿಘ್ಮೂಡರಾಗಿ ನಿಂತರು. ಕೆಲವು ಕ್ಷಣಗಳ ನಂತರ ಸಾವರಿಸಿಕೊಂಡು ಹೇಳಿದರು, ಈ ಜಾಗಕ್ಕೆ ಯಾವುದೇ ವಾಸ್ತು ಪರಿಹಾರ ಬೇಕಿಲ್ಲ.

ಈಗ ಅಚ್ಚರಿ ಪಡುವ ಸರದಿ ಸುಂದರಮೂರ್ತಿಯದಾಯಿತು. ಏಕೆ ಸ್ವಾಮಿ ಏನಾಯಿತು ಎಂದು ವಿನಯದಿಂದ ಪ್ರಶ್ನಿಸಿದರು?

ಆಗ ಪಂಡಿತರು ಹೇಳಿದರು. ನೀವು ಎಲ್ಲಿರುತ್ತೀರೋ ಆ ಜಾಗವೆಲ್ಲಾ ಅತ್ಯಂತ ಪ್ರಶಸ್ತವಾದ ಪ್ರದೇಶವಾಗಿರುತ್ತದೆ. ಯಾವಾಗ ಯಾರ ಮನಸ್ಸು ಇನ್ನೊಬ್ಬರ ಶಾಂತಿ, ಸಂತೋಷಕ್ಕೆ ಮಿಡಿಯುತ್ತದೆಯೋ, ಯಾವಾಗ ತನ್ನ ಸ್ವಾರ್ಥದ ಸೌಲಭ್ಯಕ್ಕೆ ಅಷ್ಟೇ ಅಲ್ಲದೆ, ಇತರರ ಅನುಕೂಲವನ್ನೂ ಪರಿಗಣಿಸುತ್ತದೆಯೋ. ಸದಾಕಾಲ ಯಾರು ಇತರರ ಒಳಿತಿಗಾಗಿ ತುಡಿಯುತ್ತಾರೆಯೋ ಅವರಲ್ಲಿ ಅವರಿಗರಿವಿಲ್ಲದೇ "ಸಂತತ್ವ" ಅವರಲ್ಲಿ ಮನೆಮಾಡಿರುತ್ತದೆ. ಸಂತನೊಬ್ಬ ಇತರರ ಔನ್ನತ್ಯ ದಲ್ಲಿ ತನ್ನ ಬೆಳಕು ಕಂಡುಕೊಳ್ಳುತ್ತಾನೆ. ನಿಮ್ಮ ಈ ಮನೆಗಾಗಲಿ ಅಥವಾ ತೋಟಕ್ಕಾಗಲಿ ಯಾವ ವಾಸ್ತು ಸಲಹೆಯೂ ಬೇಕಾಗಿಲ್ಲ ಎಂದು ಹೇಳಿ ನೇರವಾಗಿ ಕಾರಿಗೆ ಹಿಂದಿರುಗಿ ಬಂದು ಕುಳಿತರು.

ವಾಸ್ತು ಎಂಬ ಪರಿಕಲ್ಪನೆ ನಮ್ಮೆಲ್ಲರ ಮನಸ್ಸಿನಲ್ಲಿ ಇರಬೇಕಾದದ್ದು, ಕೇವಲ ಖಾಲಿ ಜಾಗ, ದಿಕ್ಕುಗಳು, ಕಬ್ಬಿಣ, ಇಟ್ಟಿಗೆ, ಸಿಮೆಂಟ್, ಟೈಲ್ಸ್ ಗಳ ಮೇಲಲ್ಲ,, ವಾಸ್ತು ಎಂಬ ಮಾನಸಿಕ ಪರಿಪೂರ್ಣತೆಯ ಪರಿಕಲ್ಪನೆ ಇರಬೇಕಾದದ್ದು ಜೀವನದ ವಾಸ್ತವತೆಯ, ಸಂತೃಪ್ತ, ತ್ಯಾಗ ಮನೋಭಾವ ಸ್ವಭಾವದ ಮನಸ್ಸಿನಲ್ಲಿ........!!!!!

Re: ಕಟ್ಟಡಕ್ಕೆ ವಾಸ್ತು ಅತ್ಯವಶ್ಯಕವೇ ??

Posted: August 24th, 2021, 7:39 pm
by msn1270
For those who cannot read Kannada language, watch/listen the same in video version

https://fb.watch/7AJy5hri4b/